ಸಪ್ತಾಹದ ಅರ್ಥಪೂರ್ಣ ಆಚರಣೆ : ಸಹಕಾರ ಕ್ಷೇತ್ರದ ಅಭಿವೃದ್ಧಿಯ ದಿಕ್ಸೂಚಿ

ರಾಜ್ಯದ ಎಲ್ಲಾ ಸಹಕಾರಿ ಬಂಧುಗಳಿಗೆ ಈದ್-ಮಿಲಾದ್ ಹಾಗೂ ಕ್ರಿಸ್‍ಮಸ್ ಹಬ್ಬದ ಶುಭಾಷಯಗಳು. 64ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ರಾಜ್ಯದಾದ್ಯಂತ ಅತ್ಯಂತ ಪರಿಣಾಮಕಾರಿಯಾಗಿ ಆಚರಿಸಲಾಗಿದೆ. ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಸಹಕಾರ ಮಂತ್ರಿಗಳು, ಸಚಿವ ಸಂಪುಟದ ಅನೇಕ ಸಚಿವರು, ಶಾಸಕರು, ಸಹಕಾರಿಗಳ ನಿಬಂಧಕರು, ಅವರ ಅಧಿಕಾರಿಗಳು, ಪ್ರಮುಖ ಸಹಕಾರಿ ಗಣ್ಯರು ಸೇರಿದಂತೆ ಬಹುಪಾಲು ಸಹಕಾರಿಗಳು ಈ ಸಪ್ತಾಹ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸಹಕಾರ ಕ್ಷೇತ್ರದ ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಸವಾಲುಗಳ ಬಗ್ಗೆ ಚರ್ಚೆಯಾಗಿದೆ. ಸಹಕಾರ ಕ್ಷೇತ್ರ ಅಳವಡಿಸಿಕೊಳ್ಳಬಹುದಾದ ಆಧುನಿಕ ತಾಂತ್ರಿಕತೆಯ ಬಗ್ಗೆ ಮತ್ತು ಸಹಕಾರ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಯುವಕರು ಹಾಗೂ ಮಹಿಳೆಯರು ಮತ್ತು ಸಮಾಜದ ಹಿಂದುಳಿದ ವರ್ಗದ ಜನರು ಪಾಲ್ಗೊಳ್ಳುವಂತಾಗಲು ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಸಹಕಾರ ಕ್ಷೇತ್ರದ ಬಗ್ಗೆ ಜನರಲ್ಲಿ ವಿಶ್ವಾಸಾರ್ಹತೆ ಹೆಚ್ಚಿಸುವ ಕಾರ್ಯಗಳು ನಡೆದಿರುವುದು ಸಹಕಾರ ಕ್ಷೇತ್ರದ ಆರೋಗ್ಯಕರ ಬೆಳವಣಿಗೆಗೆ ಪೂರಕ ಎಂದು ಭಾವಿಸುತ್ತೇನೆ.

ಸಪ್ತಾಹದ ಧ್ಯೇಯ ಮೊದಲ್ಗೊಂಡು 7 ದಿನಗಳಲ್ಲಿ 7 ವಿಷಯಗಳ ಬಗ್ಗೆ ಹಾಗೂ ಸಹಕಾರ ಕ್ಷೇತ್ರದ ಸಮಗ್ರ ವಿಷಯಗಳ ಬಗ್ಗೆ ಚಿಂತನೆಗಳು ನಡೆದಿವೆ. ಸಮುದ್ರ ಮಂಥನದಲ್ಲಿ ಬರುವ ಅಮೃತದಂತೆ ಅನೇಕ ಉತ್ತಮ ವಿಷಯಗಳ ಜೊತೆಗೆ ಹಾಲಾಹಲವು ಬರುವಂತೆ ಅನೇಕ ಸವಾಲುಗಳು ಹಾಗೂ ಅವುಗಳ ನಿರ್ವಹಣೆಯ ಬಗ್ಗೆ ಕ್ರಿಯಾ ಯೋಜನೆಗಳ ಸಿದ್ಧತೆ ಬಗ್ಗೆ ಚಿಂತನೆ ನಡೆದಿದೆ. ಇದರಿಂದಾಗಿ ಸಹಕಾರಿಗಳ ವಿಶೇಷವಾಗಿ ಸೌಹಾರ್ದ ಸಹಕಾರಿಗಳ ಆತ್ಮಸ್ಥೈರ್ಯ ಹೆಚ್ಚಿರುವುದು ಸಂತೋಷದ ವಿಷಯ. ಸಹಕಾರ ಸಪ್ತಾಹದ ಆಚರಣೆಯ ಜೊತೆಗೆ ನಮ್ಮ ಉತ್ಸಾಹಗಳು ನಿಲ್ಲಬಾರದು. ಈ ಕ್ಷೇತ್ರದ ಅಭಿವೃದ್ಧಿಗೆ ಇತ್ತೀಚಿಗೆ ಅನೇಕ ಸವಾಲುಗಳು ಎದುರಾಗಿವೆ. ವಿಶೇಷವಾಗಿ ಕ್ರೆಡಿಟ್ ಸಹಕಾರಿ ಸಂಸ್ಥೆಗಳಿಗೆ ಆದಾಯ ತೆರಿಗೆ ಇಲಾಖೆಯವರಿಂದ ನೋಟೀಸುಗಳು, ಜಿಎಸ್‍ಟಿ ಅಳವಡಿಸುವಲ್ಲಿ ತಾಂತ್ರಿಕ ಹಾಗೂ ವ್ಯವಹಾರಿಕ ತೊಂದರೆಗಳ ನಿವಾರಣೆ, ಸಹಕಾರಿ ಸಂಸ್ಥೆಗಳನ್ನು ಒಬ್ಬ ವ್ಯಕ್ತಿಯಂತೆ ಪರಿಗಣಿಸಿ ಬ್ಯಾಂಕುಗಳಿಗೆ ನೀಡಿರುವಂತೆ ವಿಶೇಷ ಸೌಲಭ್ಯಗಳನ್ನು ನೀಡದಿರುವುದು ಹೀಗೆ ಹಲವಾರು ವಿಷಯಗಳಲ್ಲಿ ಸಹಕಾರ ಕ್ಷೇತ್ರ ಸೌಲಭ್ಯ ವಂಚಿತವಾಗಿದೆ ಎಂದು ಭಾಸವಾಗುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯುವ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುವುದು ಅವಶ್ಯಕವೆಂದು ನಾನು ಭಾವಿಸಿದ್ದೇನೆ.

ದಿನಾಂಕ : 18-11-2017ರಂದು ತುಮಕೂರಿನಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನೇತೃತ್ವದಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಿದ ಸಹಕಾರ ಸಪ್ತಾಹ ಆಚರಣೆ ಸೌಹಾರ್ದ ಸಹಕಾರಿ ಕ್ಷೇತ್ರದ ಕಾರ್ಯಚಟುವಟಿಕೆಗಳ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯ ಹಾಗೂ ವಿಶ್ವಾಸಾರ್ಹತೆ ಹೆಚ್ಚುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಎನ್.ರಾಜಣ್ಣನವರು, ಸಂಸದರಾದ ಶ್ರೀ ಮುದ್ದುಹನುಮೇಗೌಡರವರು, ಶಾಸಕರಾದ ಶ್ರೀ ರಫೀಕ್ ಅಹ್ಮದ್‍ರವರು ಮತ್ತು ಸಹಕಾರಿಗಳ ನಿಬಂಧಕರಾದ ಶ್ರೀ ಎಂ.ಕೆ.ಅಯ್ಯಪ್ಪರವರು ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಮತ್ತು ಸಹಕಾರಿ ಮುಖಂಡರು ಮತ್ತು 3000ಕ್ಕೂ ಹೆಚ್ಚು ಸಹಕಾರಿಗಳು ಸೌಹಾರ್ದ ಸಹಕಾರಿ ಕ್ಷೇತ್ರದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದ್ದಾರೆ. ಮುಕ್ತ ಮನಸ್ಸಿನಿಂದ ಮೆಚ್ಚಿಕೊಂಡಿದ್ದಾರೆ. ಇದು ಅತ್ಯಂತ ಸಂತೋಷ ಹಾಗೂ ನಮಗೆಲ್ಲ ಹೊಸ ಉತ್ಸಾಹ ನೀಡಿದೆ.

ಸಪ್ತಾಹದ ಯಶಸ್ವಿ ಆಚರಣೆಗೆ ಪ್ರೋತ್ಸಾಹ ನೀಡಿ ಸಹಕರಿಸಿದ ತುಮಕೂರಿನ ಎಲ್ಲಾ ಸಹಕಾರಿ ಸಂಸ್ಥೆಗಳಿಗೆ, ಸಹಕಾರಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಂಯುಕ್ತ ಸಹಕಾರಿಯ ಆಡಳಿತ ಮಂಡಲಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಇದೇ ರೀತಿಯ ಸಹಕಾರವನ್ನು ಅಪೇಕ್ಷಿಸುತ್ತದೆ.

add

VIDEO NEWS

VIEW ALL